== ಬಾಲ್ಯ == ತಿಲಕರು ಹುಟ್ಟಿದ್ದು ೧೮೫೬ರ ಜುಲೈ ೨೩ರಂದು ಮಹಾರಾಷ್ತ್ರದ ರತ್ನಗಿರಿಯ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ.ಚತುರ ವಿದ್ಯಾರ್ಥಿಯಾಗಿದ್ದ ತಿಲಕನಿಗೆ ಗಣಿತದಲ್ಲಿ ವಿಶೇಷ ಪ್ರತಿಭೆಯಿತ್ತು. ಆಧುನಿಕ, ಕಾಲೇಜು ಶಿಕ್ಷಣ ಪಡೆದುಕೊಂಡ ನವ ಪೀಳಿಗೆಯ ಯುವಕರಲ್ಲಿ ತಿಲಕರೂ ಒಬ್ಬರಾಗಿದ್ದರು. ಪದವಿ ಪಡೆದ ಬಳಿಕ ಪುಣೆಯ ಖಾಸಗೀ ಶಾಲೆಯೊಂದರಲ್ಲಿ ಗಣಿತ ಶಿಕ್ಷಕರಾಗಿ ಸೇರಿದ ತಿಲಕರು , ನಂತರ ಅದನ್ನು ಬಿಟ್ಟು ಪತ್ರಕರ್ತರಾದರು. ಪಾಶ್ಚಿಮಾತ್ಯ ಶಿಕ್ಷಣ ಪಧ್ಧತಿಯು ಭಾರತೀಯ ಪರಂಪರೆಯನ್ನು ಅವಹೇಳಿಸುವಂಥಾದ್ದೂ ಹಾಗೂ ಭಾರತದ ವಿದ್ಯಾರ್ಥಿಗಳನ್ನು ಕೀಳುಗಳೆಯುವಂಥಾದ್ದು ಎಂಬ ನಿರ್ಧಾರಕ್ಕೆ ಬಂದ ಅವರು, ಈ ಪಧ್ಧತಿಯ ತೀವ್ರ ಟೀಕಾಕಾರರಾದರು. ವಿದ್ಯಾರ್ಥಿಗಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಪುಣೆಯಲ್ಲಿ ಡೆಕ್ಕನ್ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿದರು. == ರಾಜಕೀಯ ಜೀವನ == ತಿಲಕರು ಸ್ಥಾಪಿಸಿದ "ಕೇಸರಿ" ಮರಾಠಿ ಪತ್ರಿಕೆಯು ಬಹುಬೇಗ ಜನಸಾಮಾನ್ಯರ ಮನೆಮಾತಾಯಿತು. ಅಭಿಪ್ರಾಯ ಸ್ವಾತಂತ್ರ್ಯವನ್ನು, ಅದರಲ್ಲೂ ಮುಖ್ಯವಾಗಿ, ೧೯೦೫ರ ಬಂಗಾಳದ ವಿಭಜನೆಯ ವಿರೋಧವನ್ನು , ಹತ್ತಿಕ್ಕಿದ; ಭಾರತದ ನಾಗರೀಕರನ್ನು, ಸಂಸೃತಿಯನ್ನು, ಪರಂಪರೆಯನ್ನು ಹೀಯಾಳಿಸುವ ಬ್ರಿಟಿಷ್ ಸತ್ತೆಯ ತೀವ್ರ ಟೀಕೆಯನ್ನು ಅವರು ಕೇಸರಿಯಲ್ಲಿ ಮಾಡುತ್ತಿದ್ದರು. ಭಾರತೀಯರಿಗೆ ಸ್ವರಾಜ್ಯದ ಹಕ್ಕನ್ನು ಬಿಟ್ಟುಕೊಡಬೇಕೆಂದು ಅವರು ಪ್ರತಿಪಾದಿಸಿದರು. ೧೮೯೦ರ ದಶಕದಲ್ಲಿ ತಿಲಕರು ಕಾಂಗ್ರೆಸ್ ಸೇರಿದರಾದರೂ , ಬಹುಬೇಗ ಸ್ವಾತಂತ್ರ್ಯ ಹೋರಾಟದಲ್ಲಿ ಅದರ ಉದಾರೀ-ಸೌಮ್ಯವಾದೀ ಧೋರಣೆಯ ವಿರೋಧಕರಾದರು. ಗೋಪಾಲ ಕೃಷ್ಣ ಗೋಖಲೆಯವರ ಸೌಮ್ಯವಾದೀ ನೀತಿಯ ಕಟು ಟೀಕಾಕಾರರಾದರು. ಇದರಲ್ಲಿ ತಿಲಕರಿಗೆ ಬಂಗಾಳದ ಬಿಪಿನ ಚಂದ್ರ ಪಾಲ್ ಹಾಗೂ ಪಂಜಾಬಿನ ಲಾಲಾ ಲಜಪತ ರಾಯ್ ರ ಬೆಂಬಲವಿತ್ತು.೧೯೦೭ರಲ್ಲಿ ಸೂರತ್ ಅಧಿವೇಶನದಲ್ಲಿ ಕಾಂಗ್ರೆಸ್ ತಿಲಕ,ಪಾಲ್ ಹಾಗೂ ರಾಯ್ ನೇತ್ಳತ್ವದಲ್ಲಿ "ಗರಂ ದಳ" ("ಬಿಸಿ ಗುಂಪು") ಹಾಗೂ ಗೋಖಲೆಯವರ ನೇತ್ಳತ್ವದಲ್ಲಿ "ನರಂ ದಳ" ("ಮೆದು ಗುಂಪು") ಎಂದು ಇಭ್ಭಾಗವಾಯಿತು. ರಾಜದ್ರೋಹದ ಆರೋಪದ ಮೇಲೆ ೧೯೦೬ರಲ್ಲಿ ಬಂಧನಕ್ಕೊಳಗಾದ ತಿಲಕರು ತಮ್ಮ ಪರವಾಗಿ ವಕಾಲತ್ತು ವಹಿಸುವಂತೆ ಕೇಳಿಕೊಂಡದ್ದು ಯುವ ವಕೀಲ ಮಹಮದ್ ಆಲಿ ಜಿನ್ನಾರನ್ನು. ಆದರೂ, ಬ್ರಿಟಿಷ್ ನ್ಯಾಯಾಧೀಶರಿಂದ ಅಪರಾಧಿ ಎಂದು ಘೋಷಿಸಲ್ಪಟ್ಟು, ೧೯೦೮ ರಿಂದ ೧೯೧೪ರವರೆಗೆ ಬರ್ಮಾ ದೇಶದ ಮಂಡಾಲೆಯಲ್ಲಿ ಸೆರೆವಾಸ ಅನುಭವಿಸಿದರು. ಬಿಡುಗಡೆಯಾದ ನಂತರ ತಮ್ಮ ಸಹ- ರಾಷ್ಟ್ರೀಯವಾದಿಗಳನ್ನು ಕೂಡಿಕೊಂಡ ತಿಲಕರು , ೧೯೧೬ರಲ್ಲಿ ಕಾಂಗ್ರೆಸ್ಸನ್ನು ಕೂಡಾ ಪುನಹ ಒಟ್ಟುಗೂಡಿಸಿದರು. ಅಖಿಲ ಭಾರತ ಹೋಂ ರೂಲ್ ಲೀಗನ್ನು ಸ್ಥಾಪಿಸುವಲ್ಲಿ ಆನಿ ಬೆಸೆಂಟ್ ಮತ್ತು ಮಹಮದ್ ಆಲಿ ಜಿನ್ನಾರಿಗೆ ಸಹಕಾರ ನೀಡಿದರು. ಅದರ ಮೂಲಕ ಸ್ವಾತಂತ್ರ ಹೋರಾಟ ಶುರು ಮಾಡಿದರು. == ತಾತ್ವಿಕ ಮತ್ತು ಸಾಮಾಜಿಕ ಕೊಡುಗೆಗಳು == ತಿಲಕರು ಮೂಲತಃ ಅದ್ವೈತ ವೇದಾಂತದ ಪ್ರತಿಪಾದಕರಾಗಿದ್ದರೂ, ಸಾಂಪ್ರದಾಯಿಕ ಅದ್ವೈತದ "ಜ್ಙಾನವೊಂದರಿಂದಲೇ ಮುಕ್ತಿ" ಎಂಬ ನಂಬುಗೆಯು ಅವರಿಗೆ ಒಪ್ಪಿಗೆಯಿರಲಿಲ್ಲ. ಅದಕ್ಕೆ ಸರಿಸಮನಾಗಿ ಹಾಗೂ ಪೂರಕವಾಗಿ ಅವರು ಕರ್ಮಯೋಗವನ್ನೂ ಸೇರಿಸಿದರು. ವಿವಾಹಕ್ಕೆ ಕನಿಷ್ಠ ವಯೋಮಿತಿಯೇ ಮೊದಲಾಗಿ ತಿಲಕರು ಅನೇಕ ಸಾಮಾಜಿಕ ಸುಧಾರಣೆಗಳನ್ನು ಮುಂದಿಟ್ಟರು. ಮದ್ಯಪಾನ ನಿಷೇಧದ ಪರವಾಗಿ ಅವರಿಗೆ ಅತ್ಯಂತ ಕಳಕಳಿಯಿತ್ತು. ಶಿಕ್ಷಣ ಹಾಗೂ ರಾಜಕೀಯ ಜೀವನದ ಬಗ್ಗೆ ಅವರ ವಿಚಾರಗಳು ಬಹಳ ಪ್ರಭಾವಶಾಲಿಯಾಗಿದ್ದವು - ದೇವನಾಗರಿ ಲಿಪಿಯಲ್ಲಿ ಬರೆಯಲಾಗುವ ಹಿಂದಿ ಭಾಷೆಯು ಭಾರತದ ರಾಷ್ತ್ರಭಾಷೆಯಾಗಬೇಕು ಎಂದು ಮೊದಲು ಸೂಚಿಸಿದವರು ತಿಲಕರು. ಗಾಂಧೀಜಿ ಇದನ್ನು ಮುಂದೆ ಬಲವಾಗಿ ಅನುಮೋದಿಸಿದರು. ಆದರೆ, ತಿಲಕರು ಸಂಪೂರ್ಣವಾಗಿ ಭಾರತದಿಂದ ನಿರ್ಮೂಲನ ಮಾಡಬೇಕೆಂದು ಇಚ್ಛೆ ಪಟ್ಟಿದ್ದ ಇಂಗ್ಲೀಷು ಭಾಷೆ , ಇಂದಿಗೂ ಸಂವಹನದ ಒಂದು ಮುಖ್ಯ ಸಾಧನವಾಗಿ ಉಳಿದುಕೊಂಡು ಬಂದಿದೆ.ಆದರೂ ಹಿಂದಿ (ಮತ್ತು ಇತರ ಭಾರತೀಯ ಭಾಷೆಗಳ) ಜನಸಾಮಾನ್ಯರ ಮಟ್ಟದಲ್ಲಿ ಬಳಕೆ ಮತ್ತು ಬ್ರಿಟಿಷರ ಕಾಲದಿಂದ ಇಂದಿನವರೆಗೂ ನೀಡಲಾಗುತ್ತಿರುವ ಪ್ರೋತ್ಸಾಹಕ್ಕೆ ತಿಲಕರು ಅಂದು ಪ್ರಾರಂಭಿಸಿದ ಪುನರುಜ್ಜೀವನವೇ ಕಾರಣ ಎನ್ನಲಾಗುತ್ತದೆ. ತಿಲಕರ ಮತ್ತೊಂದು ದೊಡ್ಡ ಕಾಣಿಕೆಯೆಂದರೆ, ಸಾರ್ವಜನಿಕ ಗಣೇಶೋತ್ಸವ. ಭಾದ್ರಪದ ಶುಕ್ಲ ಚತುರ್ಥಿಯಿಂದ ಹಿಡಿದು ಅನಂತ ಚತುರ್ದಶಿಯವರೆಗಿನ ೧೧ ದಿನಗಳ ಈ ಉತ್ಸವ, ಖಾಸಗೀ ಧಾರ್ಮಿಕ ಆಚರಣೆಯನ್ನು ಜನಸಾಮಾನ್ಯರು ಒಟ್ಟುಗೂಡಿ ಆಚರಿಸುವ, ನಾಯಕರುಗಳಿಗೆ ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವಾಗಿ ಬದಲಾಯಿಸಿತು. ತಿಲಕರು ಪ್ರಾರಂಭಿಸಿದ ಈ ಪರಂಪರೆ ದೇಶದ ಅನೇಕ ಕಡೆಗಳಲ್ಲಿ, ಅದರಲ್ಲೂ ಮುಖ್ಯವಾಗಿ ಮಹಾರಾಷ್ತ್ರದಲ್ಲಿ ಇಂದಿಗೂ ಮುಂದುವರಿಯುತ್ತಿದೆ.ಪರದೇಶೀ ವಸ್ತುಗಳನ್ನು ಬಹಿಷ್ಕರಿಸುವಂತೆ ಅವರು ನೀಡಿದ ಕರೆ ಬಹಳಷ್ಟು ಭಾರತೀಯರಲ್ಲಿ ದೇಶಭಕ್ತಿಯನ್ನು ಉಕ್ಕಿಸಿತು. == ತಿಲಕರ ನಂತರದ ವರ್ಷಗಳು ಹಾಗೂ ಅವರ ಕೊಡುಗೆ == ತಿಲಕರು ಮಹಾತ್ಮಾ ಗಾಂಧಿಯವರ ಅಹಿಂಸಾತ್ಮಕ , ಅಸಹಕಾರ ಚಳುವಳಿಯ ಟೀಕಾಕಾರರಾಗಿದ್ದರು. ಒಂದು ಕಾಲದಲ್ಲಿ ತೀವ್ರವಾದಿ ಕ್ರಾಂತಿಕಾರಿಯೆಂದು ಪರಿಗಣಿಸಲ್ಪಟ್ಟಿದ್ದರೂ, ನಂತರದ ವರ್ಷಗಳಲ್ಲಿ ಅವರು ಗಮನಾರ್ಹವಾಗಿ ಬದಲಾಗಿದ್ದರು. ಭಾರತದ ಸ್ವಾತಂತ್ರ ಗಳಿಸಲು, ಮಾತುಕತೆಗಳ ಮೂಲಕವೇ ಹೆಚ್ಚು ಪರಿಣಾಮಕಾರಿ ಎಂಬ ಬಗ್ಗೆಯೆ ಅವರಿಗೆ ಒಲವಿತ್ತು. ಅಷ್ಟೇ ಅಲ್ಲ ಬ್ರಿಟಿಷ್ ಸಾಮ್ರಾಜ್ಯದಿಂದ ಹೊರಬರುವುದಕ್ಕೆ ಅವರ ಬೆಂಬಲವಿರಲಿಲ್ಲ. ಆದರೂ, ಸ್ವರಾಜ್ಯ ಮತ್ತು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ಜನಸಾಮಾನ್ಯರವರೆಗೆ ಕೊಂಡೊಯ್ದ ತಿಲಕರನ್ನು ಸ್ವಾತಂತ್ರ್ಯ ಚಳುವಳಿಯ ಜನಕ ಎಂದು ಪರಿಗಣಿಸಲಾಗಿದೆ. ಭಾರತೀಯ ಸಂಸ್ಕೃತಿ, ಇತಿಹಾಸ ಹಾಗೂ ಧರ್ಮದ ಬಗ್ಗೆ ಲೇಖನಗಳಿಂದ ಲಕ್ಷಾಂತರ ಭಾರತೀಯರಿಗೆ ತಮ್ಮ ಭವ್ಯ ಪರಂಪರೆಯ ಹಾಗೂ ನಾಗರೀಕತೆಗಳ ಅರಿವು ಮಾಡಿಕೊಟ್ಟು, ಅವರ ಪ್ರಜ್ಙೆಯಲ್ಲಿ ತಮ್ಮ ನಾಡಿನ ಬಗ್ಗೆ ಅಭಿಮಾನವನ್ನು ಮೂಡಿಸಿದರು . ತಿಲಕರನ್ನು ಭಾರತದ ರಾಜಕೀಯ ಹಾಗೂ ಆಧ್ಯಾತ್ಮಿಕ ನಾಯಕರನ್ನಾಗಿಯೂ, ಮಹಾತ್ಮಾ ಗಾಂಧಿಯವರನ್ನು ಇವರ ಉತ್ತರಾಧಿಕಾರಿಯಾಗಿಯೂ ಅನೇಕರು ಪರಿಗಣಿಸುತ್ತಾರೆ. ೧೯೨೦ರಲ್ಲಿ ತಿಲಕರು ತೀರಿಕೊಂಡಾಗ, ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ೨೦೦,೦೦೦ ಜನರಲ್ಲಿ ಒಬ್ಬರಾದ ಮಹಾತ್ಮಾ ಗಾಂಧಿಯವರು ತಿಲಕರನ್ನು "ಭಾರತದಲ್ಲಿ ಚಳುವಳಿಯ ಜನಕ" ( ) ಎಂದು ಬಣ್ಣಿಸಿದರು. ಇಂದು ತಿಲಕರನ್ನು ಹಿಂದೂ ರಾಷ್ಟ್ರೀಯವಾದವನ್ನು ಹುಟ್ಟುಹಾಕಿದವರೆಂದು ನಂಬಲಾಗುತ್ತದೆ. ಹಿಂದುತ್ವದ ರಾಜಕೀಯ ಪ್ರಣಾಲಿಯನ್ನು ರಚಿಸಿದ ವಿನಾಯಕ ದಾಮೋದರ ಸಾವರಕರರಿಗೆ ತಿಲಕರು ಆರಾಧ್ಯ ದೈವವಾಗಿದ್ದರು. == ಗ್ರಂಥಗಳು == ೧೯೦೩ರಲ್ಲಿ ತಿಲಕರು ಎಂಬ ಗ್ರಂಥವನ್ನು ಬರೆದು, ಅದರಲ್ಲಿ , ಖಗೋಳಶಾಸ್ತ್ರದ ಆಧಾರದ ಮೇಲೆ, ವೇದಗಳನ್ನು ಧ್ರುವ ಪ್ರದೇಶಗಳಲ್ಲಿ ಮಾತ್ರವೇ ಸೃಷ್ಟಿಸಿರಲು ಸಾಧ್ಯ ಎಂದು ವಾದಿಸುತ್ತಾರೆ. ಕೊನೆಯ ಮಂಜಿನ ಯುಗ ಶುರುವಾದ ಮೇಲೆ ಅಲ್ಲಿಂದ ದಕ್ಷಿಣದ ಕಡೆ ಸಾಗಿದ ಆರ್ಯರ ಮೂಲಕ ಅದು ದಕ್ಷಿಣ ದೇಶಗಳನ್ನು ಮುಟ್ಟಿತು ಎಂದೂ ಅವರು ಪ್ರತಿಪಾದಿಸುತ್ತಾರೆ. , ಅಥವಾ ವೇದಗಳ ಪ್ರಾಚೀನತೆಯ ಸಂಶೋಧನೆಗಳು ಎಂಬ ಪುಸ್ತಕದಲ್ಲಿ ವೇದ ಕಾಲೀನ ಜನರು ಕ್ರಿ.ಪೂ. ೪ನೆಯ ಸಹಸ್ರಮಾನದಷ್ಟು ಹಿಂದೆಯೇ ಭಾರತದಲ್ಲಿ ನೆಲೆಸಿದ್ದರು ಎಂದು ಖಗೋಳಶಾಸ್ತ್ರದ ಆಧಾರದ ಮೇಲೆ ಪ್ರತಿಪಾದಿಸುತ್ತಾರೆ. ತಿಲಕರ "ಗೀತಾರಹಸ್ಯ ಅಥವಾ ಜೀವನಧರ್ಮ ಯೋಗ" ಎಂಬ ಭಗವದ್ಗೀತೆಯ ತಾತ್ಪರ್ಯವು ಬಹಳ ಪ್ರಸಿಧ್ಧವಾದ ಕೃತಿ. ಅವರ ಇತರ ಲೇಖನ ಸಂಗ್ರಹಗಳು ಇಂತಿವೆ: ಹಿಂದೂ ಜೀವನ ತತ್ವ, ನೀತಿ ಮತ್ತು ಧರ್ಮ ( , ) (೧೮೮೭ ರಲ್ಲಿ ಪ್ರಕಾಶಿತವಾಯಿತು) ವೇದಗಳ ಕಾಲಮಾನ ಮತ್ತು ವೇದಾಂಗ ಜ್ಯೋತಿಷ ( ). ತಿಲಕರ ಪತ್ರಗಳು - ಎಂ. ಡಿ. ವಿದ್ವಾಂಸ್ ರವರಿಂದ ಸಂಪಾದಿಸಲ್ಪಟ್ಟಿದೆ. ಬಾಲ ಗಂಗಾಧರ ತಿಲಕರ ಆಯ್ದ ಕಡತಗಳು ೧೮೮೦- ೧೯೨೦ - ಸಂಪಾದನೆ: ರವೀಂದ್ರ ಕುಮಾರ್ ತಿಲಕರ ವಿಚಾರಣೆಗಳು == ಪೂರಕ ಮಾಹಿತಿ == ಸ್ವಾತಂತ್ರ್ಯ ಹೋರಾಟದ ಮೊದಲ ರಾಷ್ಟ್ರಮಟ್ಟದ ಸಾಮೂಹಿಕ ನಾಯಕ ಲೋಕಮಾನ್ಯ ತಿಲಕ್‌; ಟಿ.ಎನ್‌. ರಾಮಕೃಷ್ಣ;: 01 ಆಗಸ್ಟ್ 2020, ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶದಲ್ಲಿನ ಮಾಹಿತಿಪುಟ == ಪರಿವಿಡಿ ==